ಶಾಲಾ ರಜಾ ದಿನಗಳಲ್ಲಿ ಮಕ್ಕಳನ್ನು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿ...!
- ಡಾ. ಶಾಲಿನಿ ರಜನೀಶ್,
ರಜಾದಿನಗಳಲ್ಲಿ ಮಕ್ಕಳು ಯಾವಾಗಲೂ ಇಂಟರ್ನೆಟ್ ಮತ್ತು ಟಿವಿಗಳಲ್ಲಿ ಮುಳುಗಿರುತ್ತಾರೆ ಎಂಬುದು ಸಾಮಾನ್ಯ ದೂರು. ಆಧುನಿಕ ಕಾಲಘಟ್ಟದಲ್ಲಿರುವ ನಾವಿಂದು ಮಕ್ಕಳನ್ನು ಮೊಬೈಲ್ ಮತ್ತು ಸಂಬಂಧಿತ ವಸ್ತುಗಳಿಂದ ದೂರವಿಡುವುದು ಅನಿವಾರ್ಯವಾಗಿದೆ ಎಂದು ಜಗತ್ತಿನಾದ್ಯಂತ ಮನೋವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಮಕ್ಕಳನ್ನು ಪ್ರಚೋದಿಸುವಂತಹ ಚಟುವಟಿಕೆಗಳು ಮತ್ತು ಆಟಗಳಿಗೆ ಕಾರಣವಾದ ಟಿವಿ, ಮೊಬೈಲ್, ಐಪ್ಯಾಡ್ಗಳಿಂದ ಅವರನ್ನು ದೂರವಿರಿಸಿ, ಮತ್ತು ಅದೇ ಸಮಯದಲ್ಲಿ ಅವರನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಶಾಲೆಯ ಪಠ್ಯದಿಂದ ಹೊರಗಿನ ಅನೇಕ ಹೊಸವಿಚಾರಗಳನ್ನು ನೋಡಿ ಮತ್ತು ಮಾಡಿ ತಿಳಿಯುವಂತೆ ಮಾಡಲು ಪೋಷಕರು ಮಕ್ಕಳಿಗೆ ನೆರವಾಗಬೇಕು. ಮಗುವಿನ ಸರ್ವಾಂಗೀಣ ಬೆಳವಣಿಗೆಯೇ ಶಿಕ್ಷಣದ ಮೂಲ ಗುರಿ. ರಜಾದಿಗಳಲ್ಲಿ ಮಕ್ಕಳನ್ನು ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಮಕ್ಕಳ ಮಾನಸಿಕ, ಬೌದ್ಧಿಕ ಮತ್ತು ಶಾರೀರಕ ಬೆಳವಣಿಗೆಗೆ ಒತ್ತು ನೀಡುವ ಕಲಿಕೆ ಮತ್ತು ಕೌಶಲಗಳನ್ನು ಶಾಲೆಯ ಹೊರಗಡೆಯೂ ವಿಸ್ತರಿಸುವುದು ಪೋಷಕರ ಜವಾಬ್ದಾರಿ. ಅದಕ್ಕಾಗಿ ಕೆಲವು ಉಪಯುಕ್ತ ಮಾಹಿತಿಗಳು ಇಲ್ಲಿವೆ.
ಚಿತ್ರಕಲೆ: ಶಾಲಾ ರಜಾದಿನಗಳಲ್ಲಿ ಮಕ್ಕಳನ್ನು ಹತ್ತಿರದ ಚಿತ್ರಕಲಾ ತರಗತಿಗಳಿಗೆ ಸೇರಿಸಿ. ಅಲ್ಲಿ ಮಕ್ಕಳ ಕಲ್ಪನೆಗಳಿಗೆ ಒತ್ತು ನೀಡುವ ಅವರದೇ ಆದ ಆಲೋಚನೆಗಳನ್ನು ಚಿತ್ರಗಳ ಮೂಲಕ ಮಕ್ಕಳು ಅಭಿವ್ಯಕ್ತಿಗೊಳಿಸಲು ನೆರವಾಗುತ್ತದೆ. ಇದರಿಂದ ಮಗುವಿನ ಮನದಲ್ಲಿ ತುಂಬಿರುವ ಅಸಂಖ್ಯ ಭಾವನೆಗಳು ರೇಖೆ ಮತ್ತು ಬಣ್ಣಗಳನ್ನು ಬಳಸಿ ರಚಿಸುವ ಚಿತ್ರದ ಮೂಲಕ ಹೊರಬಂದು ಮಗುವಿನ ಮನಸ್ಸು ವಿರೇಚನಗೊಳ್ಳುತ್ತಾ ಹಗುರವಾಗುತ್ತದೆ ಎಂದು ಮನೋವಿಜ್ಞಾನಿಗಳು ತಿಳಿಸಿದ್ದಾರೆ. ಅಲ್ಲದೆ ಮಗು ತನ್ನ ವಯೋಮಾನಕ್ಕನುಗುಣವಾಗಿ ತನ್ನ ಸುತ್ತಲ ಪರಿಸರದ ಆಗು-ಹೋಗುಗಗಳನ್ನು ದೃಶ್ಯಕಲೆಯ ಮೂಲಕ ದಾಖಲಿಸುವ ಪ್ರಯೋಗಗಳನ್ನು ಕಲಿಯುತ್ತಾ ಹೋಗುತ್ತದೆ. ಮುಂದೆ ಅದು ಸಾಂಸ್ಕೃತಿಕವಾಗಿ ಬಹುದೊಡ್ಡ ಕೊಡುಗೆಯಾಗುತ್ತದೆ. ಸೃಜನಶೀಲತೆಯ ಮೂಲ ತಳಹದಿಯಾದ ಚಿತ್ರಕಲೆ ದೃಶದ ಹೊಸ ಆವಿಷ್ಕಾರಗಳನ್ನು ಬೆಳೆಸುತ್ತಾ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅವರು ಯಾವುದೇ ಕ್ಷೇತ್ರಕ್ಕೆ ಹೋದರೂ ಅಲ್ಲಿ ವಿಶೇಷವಾದದ್ದನ್ನು ಸಾಧಿಸಲು ನೆರವಾಗುತ್ತದೆ.
ಕರಕುಶಲ: ಕರಕುಶಲ ತರಗತಿಗಳಲ್ಲಿ ಮಕ್ಕಳು 3ಡಿ ಆಯಾಮಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಕೌಶಲಗಳನ್ನು ಕಲಿಯುತ್ತಾ ಸಾಗುತ್ತಾರೆ. ಇದರಲ್ಲಿ ವಿಶೇಷವಾಗಿ ಮಣ್ಣಿನ ಆಕೃತಿಗಳು ಮತ್ತು ಕಾಗದದ ಓರೆಗಾಮಿಯಂತಹ ಪ್ರಯೋಗಗಳು ಹೆಚ್ಚು ಪ್ರಯೋಜನವಾಗುತ್ತವೆ ಎಂದು ಜಪಾನಿನ ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಉದಾಹರಣೆಗೆ ಮಣ್ಣು ಮಗುವನ್ನು ಹೆಚ್ಚು ಆಕರ್ಷಿಸುತ್ತದೆ. ಅಲ್ಲದೆ ಹಲವು ಗಂಟೆಗಳವರೆಗೆ ಅದರ ಜೊತೆ ಚಟುವಟಿಕೆಯಲ್ಲಿ ಮಕ್ಕಳು ಆಸಕ್ತಿ ಕಾಯ್ದುಕೊಳ್ಳಬಹುದು. ಇದು ವಿಶ್ವದ ಹಳೆಯ ಕಲಾಪ್ರಕಾರಗಳಲ್ಲಿ ಒಂದಾಗಿದೆ. ಇಂತಹ ಚಟುವಕೆಗಳು ಮಕ್ಕಳ ಮನಸ್ಸು ಮತ್ತು ಉದ್ರೇಕಗಳನ್ನು ಶಾಂತಗೊಳಿಸುವ ಗುಣವನ್ನು ಹೊಂದಿದೆ. ಅಲ್ಲದೆ ವಿವಿಧ ಸಾಂಪ್ರದಾಯಿಕ ಕರಕೌಶಲಗಳೂ ವಿನ್ಯಾಸದ ಮಾದರಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನೆರವಾಗುತ್ತವೆ. ಮುಂದೆ ದಿನನಿತ್ಯದ ಬದುಕಲ್ಲಿ ಬೇಕಾಗುವ ಅನೇಕ ವಿನ್ಯಾಸದ ಮಾದರಿಗಳ ಹೊಸ ಸೃಷ್ಟಿಗೆ, ಸೃಜನಶೀಲತೆಗೆ ಇದು ನೆರವಾಗುತ್ತದೆ.
ಸಂಗೀತ, ನೃತ್ಯ ಮತ್ತು ನಾಟಕ : ಮಕ್ಕಳು ನೀಡುವ ಸಂಗೀತ, ನೃತ್ಯ ಮತ್ತು ನಾಟಕ ಪ್ರದರ್ಶನಗಳನ್ನು ನಾವೆಲ್ಲರೂ ಪ್ರೀತಿಸುತ್ತೇವೆ. ಇದರಲ್ಲಿ ಸಾಂಪ್ರದಾಯಿಕ, ಜನಪದ ಮತ್ತು ಮಾಡ್ರನ್ ಎಂಬ ವಿವಿಧ ಪ್ರಕಾರಗಳು ಇರುತ್ತವೆ. ಅನೇಕ ಮಕ್ಕಳು ಇಂತಹ ಯಾವುದಾದರೊಂದು ಕಲೆಯನ್ನು ಕಲಿಯಲು ಇಷ್ಟಪಡುತ್ತಾರೆ. ಅಲ್ಲದೆ ನೋಡಿ ಸಂತೋಷಿಸುವ ಹವ್ಯಾಸವುಳ್ಳವರೂ ಇರುತ್ತಾರೆ. ಹಾಗಾಗಿ ಇವುಗಳಲ್ಲಿ ಆಸಕ್ತಿಯಿರುವ ಮಕ್ಕಳನ್ನು ಅಂತಹ ತರಬೇತಿ ಕೇಂದ್ರಗಳಿಗೆ ಕಳಿಸುವ ಮೂಲಕ ಅವರನ್ನು ಪೋಷಕರು ಪ್ರೋತ್ಸಾಹಿಸಬೇಕು. ನೃತ್ಯ, ಸಂಗೀತ, ನಾಟಕ ಮುಂತಾದ ಪ್ರಾಕಾರಗಳಲ್ಲಿ ಮಕ್ಕಳು ಸಭಾಕಂಪನದಂತಹ ಆಂತರಿಕ ಭಯಗಳಿಂದ ಹೊರಬರುತ್ತಾರೆ. ಸಂದರ್ಭಕ್ಕೆ ತಕ್ಕಂತೆ ಮಾತು ನಡೆ- ನುಡಿಗಳನ್ನು ರೂಢಿಸಿಕೊಳ್ಳುವಲ್ಲಿ ಈ ಕಲೆಗಳು ನೆರವಾಗುತ್ತವೆ.
ಕ್ರೀಡೆ: ಕ್ರೀಡೆಗಳಲ್ಲಿ ಆಸಕ್ತಿಯಿಲ್ಲದ ಮಗುವೇ ಇಲ್ಲ. ಬಿಡುವು ಸಿಕ್ಕೊಡನೆ ಎಲ್ಲಾ ಮಕ್ಕಳೂ ಒಂದಲ್ಲ ಒಂದು ಆಟಗಳಲ್ಲಿ ತೊಡಗಿರುವುದನ್ನು ನಾವು ಕಾಣುತ್ತೇವೆ. ಆಟಗಳಲ್ಲಿ ಮಕ್ಕಳು ಜವಾಬ್ದಾರಿ, ಉತ್ಸಾಹಭರಿತತನ, ಸ್ಪರ್ಧಾತ್ಮಕ ಗುಣಗಳು ಮತ್ತು ಶಾರೀಕವಾಗಿ ಬಲಗೊಳ್ಳುತ್ತಾರೆ. ಸದೃಢ ದೇಹ ಹೊಂದಿದ್ದರೆ ಸಧೃಢ ಮನಸ್ಸು ಇರುತ್ತದೆ ಎಂದು ಹೇಳಿದ ಸ್ವಾಮಿ ವಿವೇಕಾನಂದರು ನಮ್ಮ ಮಕ್ಕಳು ಫುಟ್ಬಾಲ್ ನಂತಹ ಆಟಗಳನ್ನು ಆಡುವುದರಿಂದ ದೈಹಿಕವಾಗಿ ಸದೃಢರಾಗುತ್ತಾರೆ, ಸದೃಢರಾದ ಯುವಕರು ಮಾತ್ರ ಸದೃಢ ದೇಶವನ್ನು ಕಟ್ಟಬಲ್ಲರು ಎಂದಿದ್ದಾರೆ. ಡಿಸ್ಲೆಕ್ಸಿಯಾ ಮತ್ತು ಎಡಿಎಚ್ಡಿ ಮುಂತಾದ ತೊಂದರೆಯಿರುವ ಮಕ್ಕಳೂ ಕ್ರೀಡೆಯಿಂದ ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ಇದು ಹೊಸ ಸವಾಲುಗಳನ್ನು ಎದುರಿಸುವ ಮನೋದಾಢ್ರ್ಯತೆಯನ್ನು ಪ್ರತಿದಿನವೂ, ಪ್ರತಿಕ್ಷಣವೂ ಒದಗಿಸುತ್ತದೆ. ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳೂ ಅಲ್ಲಿನ ಎಲ್ಲ ಜನಪದ ಕ್ರೀಡೆಗಳನ್ನೂ ಕಲಿತು ಆಡುವುದು ಒಳ್ಳೆಯದು.
ಅಡುಗೆ : ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ಅಡುಗೆ ಮನೆಯನ್ನು ಅಮ್ಮ ಪರಿಚಯಿಸುವುದು ಒಳಿತು. ಅವರಿಗೆ ಯಾವುದಕ್ಕೆ ಏನೇನು ಬೆರೆಸುತ್ತಾರೆ? ಎಷ್ಟು ಪ್ರಮಾಣದ ಅಡುಗೆ ಸಾಮಗ್ರಿಗಳನ್ನು ಯಾವುದಕ್ಕೆ ಬಳಸಬೇಕು? ಮತ್ತು ಬಿಸಿ ಪದಾರ್ಥಗಳ ಮತ್ತು ಪಾತ್ರೆಗಳ ನಿರ್ವಹಣೆಗಳ ಬಗ್ಗೆ ಅರಿವು ಮೂಡುತ್ತದೆ, ಅಲ್ಲದೆ ಯಾವುದೇ ಸಂದರ್ಭದಲ್ಲೂ ತನಗೆ ಅಗತ್ಯವಿರುವ ಪದಾರ್ಥಗಳನ್ನು ತಯಾರಿಸಿಕೊಳ್ಳುವುದನ್ನು ಕಲಿಸುವುದರಿಂದ ಮಕ್ಕಳು ಸ್ವಾವಲಂಬಿಗಳಾಗಲು ನೆರವಾಗುತ್ತದೆ. ಅಲ್ಲದೆ ಕಷ್ಟಕಾಲಗಳಲ್ಲಿ ಇದು ನೆರವಿಗೆ ಬರುತ್ತದೆ. ಇದೂ ಕೂಡ ಜೀವನ ಕೌಶಲಗಳ ಮುಖ್ಯಭಾಗ ಎಂಬುದನ್ನು ನಾವು ಮಕ್ಕಳಿಗೆ ಕಲಿಸಬೇಕು. ರಜಾದಿನಗಳಲ್ಲಿ ತಾಯಂದಿರು ಸ್ವಲ್ಪ ಬಿಡುವು ಮಾಡಿಕೊಂಡು ಮಕ್ಕಳನ್ನು ಕೂಡಿಸಿಕೊಂಡಿ ಸ್ವಲ್ಪ ಸ್ವಲ್ಪ ಇಂತಹ ವಿಚಾರಗಳನ್ನು ಕಲಿಸುವುದು ಅತ್ಯಗತ್ಯ.
ಈಜು: ಮಕ್ಕಳಿಗೆ ಈಜು ಕಲಿಸುವುದು ಇಂದಿಗೆ ಅತ್ಯಗತ್ಯ. ಈಜು ಕಲಿಯುವುದರಿಂದ ಮಕ್ಕಳಲ್ಲಿ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿರುತ್ತದೆ. ಇದೂ ಕೂಡ ಮೂಲ ಜೀವನ-ಕೌಶಲಗಳಲ್ಲೊಂದು ಎಂಬುದನ್ನು ಮರೆಯಬಾರದು. ವಯಸ್ಸಿಗೆ ಬಂದ ಯುವಕ, ಯುವತಿಯರು ಎಲ್ಲೋ ನದೀಪಾತ್ರಗಳಿಗೆ ಹೊರಸಂಚಾರಕ್ಕೆ ಹೋಗಿ ನದಿಯಲ್ಲಿ ಕೊಚ್ಚಿಹೋದರೆಂದು ಆಗಾಗ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾಗುವುದನ್ನು ನೋಡಿರುತ್ತೇವೆ. ಇಂತಹ ಅವಘಡಗಳನ್ನು ತಪ್ಪಿಸಲು ಮಕ್ಕಳಿಗೆ ಕಿರಿಯ ವಯಸ್ಸಿನಲ್ಲಿಯೇ ಈಜುಗಾರಿಕೆಯಂತಹ ಹವ್ಯಾಸಗಳನ್ನು ಬೆಳೆಸುವುದು ಒಳ್ಳೆಯದು. ಹಾಗಾಗಿ ರಜಾದಿಗಳಲ್ಲಿ ಮಕ್ಕಳನ್ನು ಇಂತಹ ಕ್ರೀಡೆಗಳಿಗೆ ಕಳಿಸುವುದು ಸೂಕ್ತ.
ಸಮರ ಕಲೆಗಳು: ಸ್ವ-ರಕ್ಷಣಾ ಕಲೆ: ಕರಾಟೆಯನ್ನು ಸಿನಿಮಾದ ಮೂಲಕ ಸುಪ್ರಸಿದ್ಧಗೊಳಿಸಿದವರು ನಟ ಬ್ರೂಸ್ ಲೀ. ತೊಂದರೆ ನೀಡುವ ಇತರರಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಲು ಇದು ನೆರವು ನೀಡುತ್ತದೆಯಲ್ಲದೆ, ಅದು ಸಮರ ಕಲೆಗಳ ಮೂಲ ಉದ್ದೇಶವಾಗಿದೆ ಎಂದಿದ್ದಾರೆ. ಕರಾಟೆ ಅಥವಾ ಕುಂಗ್ಫೂನಂತಹ ಸಮರ ಕಲೆಗಳನ್ನು ಮಕ್ಕಳಿಗೆ ಎಳವೆಯಲ್ಲಿಯೇ ಕಲಿಸಿದರೆ ಅವರಲ್ಲಿ ಆತ್ಮವಿಶ್ವಾಸ ಮತ್ತು ಅಪಾಯಗಳನ್ನು ಎದುರಿಸುವ ಧೈರ್ಯ ಮೂಡುತ್ತದೆ. ಸ್ವಯಂ-ಗೌರವ ಮತ್ತು ಸ್ವಾಭಿಮಾನದಿಂದ ಬದುಕಲು ಮಕ್ಕಳನ್ನು ಈ ಸಮರಕಲೆಗಳು ಪ್ರೇರೇಪಿಸುತ್ತವೆ.
ಇತರ ಸ್ನೇಹಿತರೊಂದಿಗೆ ಒಂದು ಗುಂಪು ರಚಿಸಿಕೊಂಡು ಚಟುವಟಿಕೆಗಳನ್ನು ರೂಪಿಸಿಕೊಳ್ಳತ್ತಾರೆ. ನಿಮ್ಮ ಮನೆಯ ಸುತ್ತಲ ಮಕ್ಕಳ ಅಂತಹ ಗುಂಪುಗಳನ್ನು ಕರೆದು ಅವರು ತಮ್ಮ ಸದಸ್ಯರೊಂದಿಗೆ ಸೇರಿ ಆ ಪ್ರದೇಶದಲ್ಲಿ ಕೆಲವು ಉಪಯುಕ್ತ ಗಿಡಗಳನ್ನು ನೆಡುವುದು, ಗುಬ್ಬಿಗೂಡುಗಳನ್ನು ಕಟ್ಟುವುದು ಮುಂತಾದವುಗಳನ್ನು ಕಲಿಸಬೇಕು. ಇತರ ಸ್ನೇಹಿತರೊಂದಿಗೆ ಒಂದು ಗುಂಪು ರಚಿಸಿಕೊಂಡು ಚಟುವಟಿಕೆಗಳನ್ನು ರೂಪಿಸಿಕೊಳ್ಳತ್ತಾರೆ. ನಿಮ್ಮ ಮನೆಯ ಸುತ್ತಲ ಮಕ್ಕಳ ಅಂತಹ ಗುಂಪುಗಳನ್ನು ಕರೆದು ಅವರು ತಮ್ಮ ಸದಸ್ಯರೊಂದಿಗೆ ಸೇರಿ ಆ ಪ್ರದೇಶದಲ್ಲಿ ಕೆಲವು ಉಪಯುಕ್ತ ಗಿಡಗಳನ್ನು ನೆಡುವುದು, ಗುಬ್ಬಿಗೂಡುಗಳನ್ನು ಕಟ್ಟುವುದು ಮುಂತಾದವುಗಳನ್ನು ಕಲಿಸಬೇಕು. ಜೊತೆಗೆ ಮಕ್ಕಳಿಗೆ ಪರಿಸರದ ಪ್ರಜ್ಞೆಯನ್ನು ಕಲಿಸಲು ಮನೆಯಲ್ಲಿಯೇ ದೊರೆಯುವ ಹಸಿಕಸವನ್ನು ಮಣ್ಣಿನೊಂದಿಗೆ ಬೆರೆಸಿ ಕಾಂಪೋಸ್ಟಿಂಗ್ ಗೊಬ್ಬರ ತಯಾರಿಸುವ ಪ್ರಕ್ರಿಯೆಯನ್ನು ಪರಿಚಯಿಸಬೇಕು. ಇದರಿಂದ ಕಸ ಬಿಸಾಡುವುದನ್ನು ತಡೆಯುವುದರೊಂದಿಗೆ ಮನೆಯ ಸುತ್ತಲ ಗಿಡ ಮರಗಳಿಗೆ ಕಂಪೋಸ್ಟ್ ಗೊಬ್ಬರ ದೊರೆಯುತ್ತದೆ. ನಾವು ಭೂಮಿಗೆ ಸೇರಿಸುವ ತ್ಯಾಜ್ಯವನ್ನು ಕಡಿಮೆ ಮಾಡಲು ಇದು ಸುಲಭವಾದ ಮಾರ್ಗವಾಗಿದೆ! ನಿಮ್ಮ ಸಾವಯವ ಪದಾರ್ಥಗಳನ್ನು ಬಳಸಿ ತರಕಾರಿ ಮತ್ತು ಹಣ್ಣು ಸಿಪ್ಪೆಗಳನ್ನು ಬಳಸುವ ಮೂಲಕ ಮಿಶ್ರ ಗೊಬ್ಬರ ಮಾಡಬಹುದು ಎಂದು ಕಲಿಸಿ. ಇದಕ್ಕೆ ಮಾಂಸ, ಮೂಳೆಗಳು, ಮೀನು ಮತ್ತು ಕೊಬ್ಬುಗಳನ್ನು ಬೆರೆಸಬಾರದು! ನಂತರ ಮಕ್ಕಳು ಸ್ವಂತ ಗಿಡಗಳನ್ನು ಬೆಳೆಯಲು ಮನೆಯಲ್ಲಿ ತಯಾರಿಸಿದ ಈ ಮಿಶ್ರಗೊಬ್ಬರ ಬಳಸಬಹುದು ಎಂದು ತಿಳಿಸಿ. ಇನ್ನು ಕಷ್ಟದಲ್ಲಿರುವ ಸ್ನೇಹಿತರಿಗಾಗಿ ಅಗತ್ಯವಿರುವ ಪುಸ್ತಕ, ಬಟ್ಟೆ, ಇತ್ಯಾದಿಗಳನ್ನು ಹೊಂದಿಸಿ ಕೊಡುವಂತ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿ. ಇದು ಜೀವನದ ಅಗತ್ಯ ಕೌಶಲ್ಯಗಳಲ್ಲೊಂದು. ತಾನು ಬದುಕಿ ತನ್ನ ಸುತ್ತಲ ಬದುಕನ್ನು ಪ್ರೀತಿಸುವ ಗುಣಗಳನ್ನು ಅವರಲ್ಲಿ ಬಿತ್ತಬೇಕು. ಮತ್ತು ತನ್ನ ಸುತ್ತಲ ಮರ, ಗಿಡ, ಪ್ರಾಣಿ, ಪಕ್ಷಿ ಸಂಕುಲಗಳನ್ನು ಪ್ರೀತಿಸುವ ಮನೋಭಾವಗಳನ್ನು ಕಲಿಸಿದರೆ ಭವಿಷ್ಯದಲ್ಲಿ ಅವರು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಬದುಕಿನಲ್ಲಿ ಇಂತಹ ಹೊಸ, ಹೊಸ ಕಾರ್ಯಕ್ರಮಗಳನ್ನು ರೂಪಿಸಲು ಅನೇಕ ಅವಕಾಶಗಳನ್ನು ನೀಡುತ್ತದೆ. ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಬೆಂಬಲಿಸಿ, ಪ್ರೋತ್ಸಾಹಿಸಿ. ಒಮ್ಮೆ ಕಲಿಸಿದ ನಂತರ, ಮಕ್ಕಳು ಈ ವಿಷಯಗಳಲ್ಲಿ ಹೇಗೆ ನಡೆದುಕೊಳ್ಳುತ್ತಾರೆಂಬುದನ್ನು ನೋಡಿ ನೀವು ಆಶ್ಚರ್ಯಪಡುತ್ತೀರಿ!
ಕತೆ ಹೇಳುವ ಕಲೆ : ನಾವು ಚಿಕ್ಕವರಿದ್ದಾಗ ನಮ್ಮ ಅಜ್ಜಿ, ತಾತ ರಜೆ ಬಂದಾಗ ಮಕ್ಕಳನ್ನು ಸುತ್ತ ಕೂಡಿಸಿಕೊಂಡು ಸಣ್ಣ ಸಣ್ಣ ಕತೆಗಳನ್ನು ಹೇಳಿ ಅವು ನಮ್ಮೊಳಗೆ ಶಾಶ್ವತವಾಗಿ ನೆನಪುಳಿಯುವಂತೆ ಮಾಡುತ್ತಿದ್ದರು. ಅವುಗಳಲ್ಲಿ ನೀತಿ ಕತೆಗಳು, ಜನಪದದ ಕತೆಗಳು, ಪುರಾಣದ ಕತೆಗಳು ಹೀಗೆ ವಿವಿಧ ಕತೆಗಳಿರುತ್ತಿದ್ದವು. ನಾವೂ ಆಸಕ್ತಿಯಿಂದ ಕೇಳಿ ಕಲಿಯುತ್ತಿದ್ದೆವು. ಇಂದು ಕಾಲ ಬದಲಾಗಿದೆ. ಮಕ್ಕಳು ಅದರಲ್ಲೂ ನಗರ ಪ್ರದೇಶದ ಮಕ್ಕಳಿಗೆ ಇಂತಹ ಅವಕಾಶಗಳು ಕಡಿಮೆಯಾಗಿವೆ. ಈ ನಿಟ್ಟಿನಲ್ಲಿ ರಜಾ ಕಾಲಗಳಲ್ಲಿ ಬಿಡುವು ಮಾಡಿಕೊಂಡು ಮಕ್ಕಳೊಂದಿಗೆ ಅಜ್ಜ-ಅಜ್ಜಿ ಮನೆಗಳಿಗೆ ಹೋಗಿ ಬನ್ನಿ. ಅಲ್ಲಿನ ಸುಂದರ ಸ್ವಚ್ಛ ಪರಿಸರ, ಆತ್ಮೀಯತೆ ಮತ್ತು ಹಿರಿಯರ ಪ್ರೀತಿ ಮಕ್ಕಳಿಗೆ ದೊರೆಯುವುದರ ಜೊತೆಗೆ ಇಂತಹ ಕತೆ ಹೇಳುವ-ಕೇಳುವ ಪರಂಪರೆ ಮುಂದುವರೆಯಲು ಸಹಾಯವಾಗುತ್ತದೆ. ಬೇರೆ ಚಟುವಟಿಕೆಗಳಿಗೆ ಹೋಲಿಸಿದರೆ, ಕಥೆ ಹೇಳುವಿಕೆಯು ಪ್ರತಿ ಮಗುವಿನ ಜೀವನದ ಪ್ರಮುಖ ಭಾಗವಾಗುತ್ತದೆ. ಕಾರಣ ಮಕ್ಕಳು ಆ ವಯೋಮಾನದಲ್ಲಿ ಕತೆಗಳ ಮೂಲಕ ವರ್ಣರಂಜಿತ ಸುಂದರ ಪ್ರಪಂಚವನ್ನು ಕಲ್ಪಿಸಿಕೊಂಡು ಸಂತೋಷಪಡುತ್ತಾರೆ. ಮಗುವಿನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಲ್ಲಿ ಕಥೆ-ಹೇಳುವಿಕೆಯು ಪ್ರಮುಖ ಪಾತ್ರವಹಿಸುತ್ತದೆ. ಸರಿಯಾದ ರೀತಿಯ ಕಥೆಗಳೊಂದಿಗೆ, ನಾವು ಮಕ್ಕಳಲ್ಲಿ ಮೌಲ್ಯಗಳನ್ನು ಹುಟ್ಟುಹಾಕಬಹುದು, ಕಲಿಸಬಹುದು. ಕಥೆ-ಹೇಳುವಿಕೆಯು ವಿವಿಧ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ಮಕ್ಕಳ ಆಲಿಸುವಿಕೆಯನ್ನು, ಮಾತನಾಡುವ ಮತ್ತು ಒಟ್ಟಾರೆ ಭಾಷಾ ಕೌಶಲಗಳನ್ನು ಸುಧಾರಿಸಿ ಸೃಜನಶೀಲತೆಯನ್ನು ಪ್ರೋತ್ಸಾಹಿಸಲು ಇದು ನೆರವಾಗುತ್ತದೆ.
ಕಲಾಗ್ಯಾಲರಿ ಹಾಗೂ ಗ್ರಂಥಾಲಯಗಳಿಗೆ ಭೇಟಿ : ಕಲಾಗ್ಯಾಲರಿ ಹಾಗೂ ಲೈಬ್ರರಿಗಳಿಗೆ ಮಕ್ಕಳನ್ನು ಆಗಾಗ ಕರೆದುಕೊಂಡು ಹೋಗಬೇಕು. ಕನಿಷ್ಟ ರಜಾದಿನಗಳಲ್ಲಾದರೂ ಪೋಷಕರು ಬಿಡುವು ಮಾಡಿಕೊಂಡು ಕಲಾಗ್ಯಾಲರಿ ಹಾಗೂ ಗ್ರಂಥಾಲಯಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವುದು ಉತ್ತಮ. ಕಲಾಗ್ಯಾಲರಿಗಳಲ್ಲಿ ನಮ್ಮ ರಾಜ್ಯದ, ದೇಶದ ಮಹಾನ್ ಕಲಾವಿದರು ರಚಿಸಿದ ಚಿತ್ರಕಲಾಕೃತಿಗಳು, ಶಿಲ್ಪಗಳು ಇರುತ್ತವೆ. ಅವುಗಳ ಬಗ್ಗೆ ತಿಳಿಸಿಹೇಳುವುದರಿಂದ ಮಕ್ಕಳಿಗೆ ನಮ್ಮ ಕಲೆ, ಸಂಸ್ಕೃತಿಗಳ ಬಗ್ಗೆ ಎಳವೆಯಲ್ಲಿಯೇ ಗೌರವ ಮೂಡುತ್ತದೆ. ಕಲಾಕೃತಿಗಳಲ್ಲಿ ಕಾಣಿಸುವ ವಿವಿಧ ಶೈಲಿ, ವಸ್ತು ಮತ್ತು ತಂತ್ರಗಳಲ್ಲಿ ಇರುವ ವ್ಯತ್ಯಾಸಗಳನ್ನು ಮಕ್ಕಳಿಗೆ ವಿವರಿಸಿ ಹೇಳಿಕೊಡಬೇಕು.
ಇನ್ನು ಗ್ರಂಥಾಲಯಗಳಿಗೆ ಭೇಟಿ ನೀಡಿ ಅಲ್ಲಿ ದೊರೆಯುವ ಅಪರೂಪದ ಪುಸ್ತಕಗಳನ್ನು ನೀಡಿ ಮಕ್ಕಳನ್ನು ಓದಲು ಪ್ರಚೋದಿಸಬೇಕು. ಆ ಮೂಲಕ ಮಕ್ಕಳಲ್ಲಿ ಓದುವಿಕೆ ಹಾಗೂ ಭಾಷಾ ಸಂಸ್ಕೃತಿಯನ್ನು ಪ್ರೀತಿಸುವಂತೆ ಮಾಡಬೇಕು. ಹಾಗಾದಲ್ಲಿ ಮಾತ್ರ ಭವಿಷ್ಯದಲ್ಲಿ ಮಕ್ಕಳು ಉತ್ತಮ ಓದುಗರಾಗುವ ಜೊತೆಗೆ ಉತ್ತಮಂ ಬರಹಗಾರರೂ, ಕಲಾವಿದರೂ ಸೃಷ್ಟಿಯಾಗಬಹುದು. ಹಾಗಾಗಿ ಮಕ್ಕಳನ್ನು ಕಲಾಗ್ಯಾಲರಿ ಹಾಗೂ ಗ್ರಂಥಾಲಯಗಳಿಗೆ ಕರೆದುಕೊಂಡು ಹೋಗುವ ಮೂಲಕ ಅವರಲ್ಲಿ ಕಲೆ ಸಂಸ್ಕೃತಿಗಳನ್ನು ತಿಳಿಸಲು ಇದು ಉತ್ತಮ ವಿಧಾನವಾಗಿದೆ! ರಜಾ ದಿನಗಳನ್ನು ಮಕ್ಕಳ ಆಸಕ್ತ್ತಿ ಕ್ಷೇತ್ರಗಳಲ್ಲಿ ತೊಡಗಿಸಿದರೆ ಅವರ ಕಲಿಕೆಯ ಆವರಣ ವಿಸ್ತರಿಸುತ್ತದೆ.
ಶಾಲಾ ರಜಾ ದಿನಗಳಲ್ಲಿ ಮಕ್ಕಳನ್ನು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿ...!
Faaip | Wednesday, 23 June 2021
Next
« Prev Post
« Prev Post
Previous
Next Post »
Next Post »
No comments:
Post a Comment